Sunday, August 1, 2021

ಸ್ವರ್ಗವಿದೆ ದುಃಖಿಸದಿರಿ



ಒಳ್ಳೆಯ ಮನಸ್ಸಿನಿಂದ ಆತ್ಮೀಯತೆಯೊಂದಿಗೆ ಹೆಣ್ಣು ಮಕ್ಕಳ ಪೋಷಣೆ ಮಾಡಿರಿ *“ಯಾವನು ಮೂವರು ಹೆಣ್ಣು ಮಕ್ಕಳನ್ನು ಅಥವಾ ಮೂವರು ಸೋದರಿಯರನ್ನು ಅವರು ದೊಡ್ಡರಾಗುವ ತನಕ ಹಾಗೂ ಅವರಿಗೆ ನಿಮ್ಮ ಆಶ್ರಯ ಇಲ್ಲವಾಗುವ ತನಕ ಸಾಕಿ ಸಲಹುವನೋ, ಅವರಿಗೆ ವಿದ್ಯೆ, ಬುದ್ದಿಯನ್ನು ಕಲಿಸುವನೋ, ಅವರೊಂದಿಗೆ ಕರುಣೆಯಿಂದ ವರ್ತಿಸುವನೋ ಅವನಿಗೆ ಅಲ್ಲಾಹನು ಸ್ವರ್ಗವನ್ನು ಕಡ್ಡಾಯಗೊಳಿಸುವನು.

 ಪ್ರವಾದಿ ( ಸ ) ಇದನ್ನು ಹೇಳಿದಾಗ ಒಬ್ಬ ವ್ಯಕ್ತಿಗೆ “ಇಬ್ಬರೇ ಇದ್ದರೆ?” ಎಂದು ಪ್ರಶ್ನಿಸಿದಾಗ ಹಾಗೂ “ಒಬ್ಬಳೇ ಇದ್ದರೆ?” ಎಂದೆಲ್ಲಾ ಕೇಳುತ್ತಿದ್ದಾಗಲೂ ಇದೇ ಸುವಾರ್ತೆಯನ್ನು ನೀಡುತ್ತಿದ್ದರು (ಮಿಶ್ಕಾತ್)

 ನಿಮ್ಮ ಮಕ್ಕಳು ಅಲ್ಲಾಹನ ಅನುಗ್ರಹವೆಂದು ಜ್ಞಾಪಿಸಿರಿ, ಗಂಡು ಮಗುವಾದರೆ ಸಂತೋಷ , ಹೆಣ್ಣಾದರೆ ದುಃಖ ಪಡೆಯದಿರಿ. ಕಾರಣ ಅವುಗಳ ಪೈಕಿ ಯಾವುದು ಉತ್ತಮವೆಂಬುದು ಅಲ್ಲಾಹನೇ ಚೆನ್ನಾಗಿ ಬಲ್ಲನು.

“ಯಾರು ಹೆಣ್ಣು ಮಕ್ಕಳ ಜನನ ಮೂಲಕ ಪರೀಕ್ಷಿಸಲ್ಪಡುವರೋ, ಅವರೊಂದಿಗೆ ಉತ್ತಮವಾಗಿ ವ್ಯವಹರಿಸಿ ಆ ಪರೀಕ್ಷೆಯಲ್ಲಿ ಸಫಲರಾಗುವರೋ ಆ ಹೆಣ್ಣು ಮಕ್ಕಳು ನಿರ್ಣಾಯಕ ದಿನದಂದು ಅವರ ಮಟ್ಟಿಗೆ ನರಕಾಗ್ನಿಯಿಂದ ರಕ್ಷಿಸುವ ಗುರಾಣಿಯಾಗಿ ಮಾರ್ಪಡುವರು (ಮಿಶ್ಕಾತ್) 

ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಇಬ್ಬರನ್ನು ಸಮಾನವಾಗಿ ಪ್ರೀತಿಸಿದರೆ ಅಲ್ಲಾಹನು ಸ್ವರ್ಗ ಪ್ರವೇಶ ಮಾಡಿಸುವನು (ಅಬೂದಾವೂದ್)

ಅವರ ಮಗ ಇಬ್ರಾಹಿಂ(ರ) ಸಾವಿನ ಸಂದರ್ಭದಲ್ಲಿ, ಪ್ರವಾದಿ (ಸ) ಅವರ ಮಾತುಗಳು: ನಮ್ಮಕಂಗಳು ಕಣ್ಣೀರಿನಿಂದ ತುಂಬಿವೆ, ಹೃದಯ ದುಃಖದಿಂದ ಭಾರವಾಗಿದೆ, ನೋವಿನಿಂದ ಬೆಂದಿದೆ, ಆದರೆ ನಾವು ನಮ್ಮ ತುಟಿಗಳಿಂದ ಅಲ್ಲಾಹನ ಮೆಚ್ಚುಗೆಯ ಶಬ್ದಗಳ ಹೊರತು ಬೇರೆ ಮಾತುಗಳನ್ನಾಡುವುದಿಲ್ಲ. 

ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊ'ನ್ 

ನಾವು ಅಲ್ಲಾಹನಿಗೆ ಸೇರಿದವರು, ಮತ್ತು ಅವನಲ್ಲಿಯೇ ಹತ್ತಿರವೇ ಮರಳುವುದು


ಅಲ್ಲಾಹನು ನಮ್ಮೆಲ್ಲರ ಸತ್ಕರ್ಮಗಳನ್ನು ಸ್ವೀಕರಿಸಲಿ ಹಾಗೂ ಎಲ್ಲಾ ವಿಪತ್ತುಗಳಿಂದ ನಮ್ಮನ್ನು ಕಾಪಾಡಲಿ. ಆಮೀನ್

Monday, June 7, 2021

ಸರಳ ಜೀವನ

 

ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸಂತೋಷ ಪಡಿಸಲು ಹಣ, ಆಸ್ತಿ, ಅಂತಸ್ತು ಬೇಕಾಗಿಲ್ಲ.... ಸಮಯ, ಪ್ರೀತಿ ಮತ್ತು ಒಳ್ಳೆಯ ನಾಲ್ಕು ಮಾತುಗಳು ಸಾಕು. ಸರಳ ಜೀವನ ಸಂಯಮವನ್ನು ಕಲಿಸುತ್ತದೆ; ಸರಳ ವ್ಯಕ್ತಿತ್ವ ಮನುಷ್ಯತ್ವವನ್ನು ಬೆಳೆಸುತ್ತದೆ; ಸರಳ ನಡೆ ನುಡಿ ನಮ್ಮ ಜೀವನವನ್ನು ಉತ್ತುಂಗಕ್ಕೇರಿಸುತ್ತದೆ.....

 

ನಿಮ್ಮ ಜೀವನವು ಸುಂದರವಾಗಿರಲಿ – ಶುಭೋದಯ

Monday, March 1, 2021

ಜಾತಸ್ಯ ಮರಣಂ ಧ್ರುವಂ

ಕುಲ್ಲು ನಫ್ಸಿನ್ ಜಾ'ಯಿಕತುಲ್ ಮೌತ್ 

ಹುಟ್ಟಿದ ಪ್ರತಿಯೊಂದು ಜೀವಿಗೊ ಸಾವು ಖಂಡಿತವಾಗಿ ಬರಲಿದೆ, ಭೂಮಿಯಿಂದ ಪುಣ್ಯ ಅಥವಾ ಪಾಪ ಹೊತ್ತುಕೊಂಡು ಹೋಗುತ್ತೇವೆ, ಅದಕ್ಕೆ ಪುಣ್ಯದ  ಕೆಲಸವನ್ನು ಜಾಸ್ತಿ ಮಾಡಬೇಕು.

Saturday, August 15, 2020

ರೇಶ್ಮಿ ರುಮಾಲ್ ಚಳುವಳಿ - 1916

 #ಸ್ವತಂತ್ರತಾದಿವಸ2020 

ಬ್ರಿಟಿಷರ ಅತಿಯಾದ ಅಧಿಕಾರ ಪ್ರಾಬಲ್ಯತೆ ಮತ್ತು ಆಡಳಿತ ನಿಯಂತ್ರಣದಿಂದ ಭಾರತದ ಸ್ವಾತಂತ್ರ್ಯಕ್ಕಾಗಿ ಜಮಿಯತ್ ಉಲಮಾ ಅವರ ಮತ್ತೊಂದು ಪ್ರಾಯೋಗಿಕ ಪ್ರಯತ್ನ

1914 ರಲ್ಲಿ ಮೊದಲ ಮಹಾಯುದ್ಧವು ಭುಗಿಲೆದ್ದಾಗ , ದಾರುಲ್ ಉಲೂಮ್ ದೇವ್ ಬಂದ್ ಅವರ ಗೌರವಾನ್ವಿತ ಶಿಕ್ಷಕ ಶೇಖುಲ್ ಹಿಂದ್ ಮೌಲಾನಾ ಮಹ್ಮೂದ್ ಹಸನ್, ಇದು ದೇಶದ ಮೇಲೆ ಬ್ರಿಟಿಷ್ ಅಧಿಕಾರವನ್ನು ಪ್ರಶ್ನಿಸುವ ಒಂದು ಅವಕಾಶವೆಂದು ಭಾವಿಸಿದರು. ವಿದೇಶಿಯರನ್ನು ಉರುಳಿಸಲು ಅಫ್ಘಾನಿಸ್ತಾನ ಮತ್ತು ಟರ್ಕಿಯಂತಹ ಮುಸ್ಲಿಂ ರಾಷ್ಟ್ರಗಳ ಬೆಂಬಲವನ್ನು ಪಡೆಯಲು ಅವರು ನಿರ್ಧರಿಸಿದರು. ಅವರು ಸ್ವತಃ ಅರೇಬಿಯಾಕ್ಕೆ ತುರ್ಕರೊಂದಿಗೆ ಮಾತುಕತೆ ನಡೆಸಲು ಹೊರಟರು ಮತ್ತು ಭಾರತದಲ್ಲಿನ ಸ್ವಾತಂತ್ರ್ಯ ಚಳವಳಿಯನ್ನು ಬೆಂಬಲಿಸಿ ಮೇಲ್ಮನವಿಗಳನ್ನು ಬರೆಯಲು ಟರ್ಕಿಶ್ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಏತನ್ಮಧ್ಯೆ, ಅವರು ಅದೇ ಕಾರಣಕ್ಕಾಗಿ ತಮ್ಮ ಪ್ರತಿನಿಧಿಯಾಗಿ ಮೌಲಾನಾ ಉಬೇದುಲ್ಲಾ ಸಿಂಧಿಯನ್ನು ಕಾಬೂಲ್ ಗೆ  ಕಳುಹಿಸಿದ್ದರು. ಅವರು ಕಾಬೂಲ್‌ನಿಂದ ಮೂರು ರಹಸ್ಯ ಪತ್ರಗಳನ್ನು ಬರೆದಿದ್ದರು, ಮೌಲಾನಾ ಮಹಮೂದ್ ಹಸನ್ ಅವರು ಬ್ರಿಟಿಷರ ವಿರುದ್ಧ ದಂಗೆಯನ್ನು ಹುಟ್ಟುಹಾಕುವ ಯೋಜನೆಯನ್ನು ವಿವರಿಸಿದ್ದರು.

ದುರದೃಷ್ಟವಶಾತ್, ಈ ಪತ್ರಗಳು ವಸಾಹತುಶಾಹಿ ಅಧಿಕಾರಿಗಳ ಕೈಗೆಟುಕಿದ್ದವು.

ಪತ್ರಗಳನ್ನು ರೇಷ್ಮೆ ಕರವಸ್ತ್ರದ ಮೇಲೆ ಬರೆಯಲಾದ ಕಾರಣ, ಬ್ರಿಟಿಷರು ಈ ಪ್ರಕರಣವನ್ನು ‘ಸಿಲ್ಕ್ ಲೆಟರ್ ಪಿತೂರಿ ಪ್ರಕರಣ’ ಎಂದು ಉಲ್ಲೇಖಿಸಿದ್ದಾರೆ

ಕಾಕೋರಿ ರೈಲು ದರೋಡೆ

#KakoriConspiracy

1921 ನೆಯ ಇಸವಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ದೇಶದಾದ್ಯಂತ ಅಸಹಕಾರ ಚಳುವಳಿ ಪ್ರಾರಂಭವಾಯಿತು. ಬ್ರಿಟಿಷರೊಡನೆ ಸಹಕರಿಸಬೇಡಿ. ತೆರಿಗೆ ಕೊಡಬೇಡಿ, ಹೀಗೆ ಗಾಂಧೀಜಿ ಕರೆಯಿತ್ತರು. ಈ ಚಳುವಳಿ ಇಡೀ ಯುವ ಜನಾಂಗದಲ್ಲಿ ಸ್ವಾತಂತ್ಯ್ರಾಕಾಂಕ್ಷೆಯ ಕಿಚ್ಚನ್ನು ಹೊತ್ತಿಸಿತು.

ಆದರೆ ಚೌರಿ ಚೋರ ಎನ್ನುವ ಕಡೆ ಕೆಲವು ಜನರು ಅಹಿಂಸೆಯನ್ನು ಮರೆತರು. ಅನೇಕ ಮಂದಿ ಪೋಲಿಸರನ್ನು ಸುಟ್ಟರು. ಇದನ್ನು ಕೇಳಿದ ಗಾಂಧೀಜಿಗೆ ನೋವಾಯಿತು. “ದೇಶ ಇನ್ನೂ ಅಹಿಂಸಾಯುತ ಹೋರಾಟಕ್ಕೆ ಸಿದ್ಧವಾಗಿಲ್ಲ” ಎಂದು ಹೇಳಿ 1922 ಫೆಬ್ರವರಿಯಲ್ಲಿ ಚಳುವಳಿಯನ್ನು ನಿಲ್ಲಿಸಿ ಬಿಟ್ಟರು. ಇದರಿಂದ ಯುವಜನಾಂಗ ತೀವ್ರ ಹತಾಶೆಗೆ ಗುರಿಯಾಯಿತು.

ಹತಾಶರಾದ ಯುವಜನರಲ್ಲಿ ಕ್ರಾಂತಿಕಾರಿ ಭಾವನೆಗಳು ಬಲಗೊಂಡವು. ಬ್ರಿಟಿಷರದು ದೊಡ್ಡ ಸಾಮ್ರಾಜ್ಯ. ಅವರಿಗೆ ಸೈನ್ಯಗಳುಂಟು, ಪ್ರಬಲವಾದ ಆಯುಧಗಳುಂಟು. ಇಂತಹವರು ಒಳ್ಳೆಯ ಮಾತಿಗೆ ಭಾರತವನ್ನು ಬಿಟ್ಟು ಹೋಗುತ್ತಾರೆಯೇ? ಹೋರಾಟ ನಡೆಸಬೇಕು, ಅಗತ್ಯವಾದಾಗ ರಿವಾಲ್ವಾರ್‌, ಬಾಂಬ್ ಇಂತಹ ಅಯುಧಗಳನ್ನೂ ಉಪಯೋಗಿಸಬೇಕು, ಬ್ರಿಟಿಷರ ಎದೆ ನಡುಗುವಂತೆ ಮಾಡಬೇಕು, ಅವರು ಹೆದರಿಕೊಂಡು ಭಾರತವನ್ನು ಬಿಟ್ಟು ಹೋಗುವಂತೆ ಅವರಿಗೆ ತಲ್ಲಣವನ್ನು ಮಾಡಬೇಕು ಎಂದು ಕ್ರಾಂತಿಕಾರಿಗಳ ದೃಢನಂಬಿಕೆ. ಪರಿಣಾಮವಾಗಿ ಅಲ್ಲಲ್ಲಿ ಚದುರಿ ಹೋಗಿದ್ದ ಕ್ರಾಂತಿಕಾರಿ ದಳಗಳು ಸುಸಂಘಟಿತವಾಗಿ ತೊಡಗಿದವು. ಕಾಶಿ ಕ್ರಾಂತಿಕಾರರ ಪ್ರಮುಖ ಕೇಂದ್ರವಾಯಿತು. ಸಶಸ್ತ್ರ ಕ್ರಾಂತಿಯಿಂದ ನಾಡನ್ನು ಸ್ವತಂತ್ರ ಗೊಳಿಸುವುದನ್ನೇ ಮುಖ್ಯ ಗುರಿಯಾಗಿ ಉಳ್ಳ “ಹಿಂದೂಸ್ಥಾನ ರಿಪಬ್ಲಿಕನ್ ಅಸೊಸಿಯೇಷನ್” ಎಂಬ ಸಂಘವು ರೂಪುಗೊಂಡಿತು.

ಈ ಸಂಘವು 1925ರಲ್ಲಿ “ಕ್ರಾಂತಿಕಾರಿ” ಎಂಬ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿ ತನ್ನ ರೂಪುರೇಷೆಗಳನ್ನು ಪ್ರಸಿದ್ಧಗೊಳಿಸಿತು. ಕಲ್ಕತ್ತಾದಿಂದ ಲಾಹೋರಿನವರೆಗೆ ಈ ಪ್ರಣಾಳಿಕೆ ಏಕ ಕಾಲದಲ್ಲಿ ಹೊರಬಂದು, ಸರಕಾರವನ್ನು ದಂಗುಬಡಿಸಿತು. ಭಾರತದ ಎಲ್ಲಾ ರಾಜ್ಯಗಳು ಸೇರಿ ಒಂದು ಒಕ್ಕೂಟವಾಗಬೇಕು, ಪ್ರಾಂತ್ಯಗಳಿಗೆ ತಮ್ಮ ತಮ್ಮ ಒಳ ಆಡಳಿತ ನಡೆಸಿಕೊಳ್ಳುವಷ್ಟು ಅಧಿಕಾರವಿರಬೇಕು, ಒಬ್ಬ ಮನುಷ್ಯ ಇನ್ನೊಬ್ಬನನ್ನು ದುಡಿಸಿಕೊಂಡು ಹಣ ಪಡೆಯುವುದು, ಅಧಿಕಾರ ನಡೆಸುವುದು ಹೋಗಬೇಕು, ಇವು ಈ ಸಂಘದ ಗುರಿಗಳೆಂದು ಸಾರಲ್ಪಟ್ಟಿತ್ತು.

ಈಗ ಕ್ರಾಂತಿಕಾರಿ ಪಕ್ಷಕ್ಕೆ ಇದ್ದ ಪ್ರಮುಖ ಕೊರತೆ ಹಣದ್ದಾಯಿತು. ಶಸ್ತ್ರಗಳನ್ನು ಸಂಗ್ರಹಿಸಲು, ಕಾರ್ಯಕರ್ತರನ್ನು ಪೋಷಿಸಲು, ಪ್ರಚಾರಕಾರ್ಯಗಳನ್ನು ನಡೆಸಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಹಣ ಬೇಕಾಗುತ್ತಿತ್ತು. ಸದಸ್ಯರಿಂದ ಚಂದಾ ಸೇರಿಸಿಯಾಯಿತು. ಕೆಲವರು ತಮ್ಮ ತಮ್ಮ ಮನೆಗಳಿಂದ ಕದ್ದು, ಬೇಡಿ ತಂದುದಾಯಿತು. ಮಿತ್ರರಿಂದ ಹಣ ಕೂಡಿಸಿದ್ದೂ ಆಯಿತು. ಆದರೆ ಇವರು ಇಟ್ಟುಕೊಂಡಿದ್ದ ಗುರಿಗೆ, ಮಾಡಬೇಕಾದ ಕೆಲಸಕ್ಕೆ ಹತ್ತಾರು ಸಹಸ್ರ ರೂಪಾಯಿಗಳೇ ಬೇಕಾಗಿತ್ತು. ದೇಶದ ಕೆಲಸಕ್ಕೆ ಹಣ ಬೇಕು.

ಕೆಲವು ಗ್ರಾಮಗಳಲ್ಲಿ ಡಕಾಯಿತಿ ನಡೆಸಿದರು ಕ್ರಾಂತಿಕಾರಿಗಳು. ಡಕಾಯಿತಿಗಳಲ್ಲಿ ದೊರೆಯುತ್ತಿದ್ದ ನೂರಿನ್ನೂರು ರೂಪಾಯಿಗಳು ಪಕ್ಷದ ವಿಶಾಲ ಕಾರ್ಯಗಳಿಗೆ ಸಾಲುತ್ತಿರಲಿಲ್ಲ. ಮೇಲಾಗಿ ಸ್ವಾತಂತ್ರ್ಯ ಗಳಿಸುವುದಕ್ಕೆ ಆದರೂ ನಮ್ಮ ದೇಶದ ಜನರನ್ನೇ ಸುಲಿಗೆ ಮಾಡಬೇಕಾಗಿ ಬರುತ್ತಿದ್ದುದು ಹೃದಯವಂತರಾದ ಈ ಕ್ರಾಂತಿಕಾರಿಗಳಿಗೆ ಹಿಡಿಸುತ್ತಿರಲಿಲ್ಲ.

ಕ್ರಾಂತಿಕಾರಿಗಳಲ್ಲಿ ಪ್ರಮುಖ ಹೆಸರಾದ ರಾಮಪ್ರಸಾದ್ ಒಂದು ದಿನ ಷಾಜಹಾನ್ ಪುರದಿಂದ ಲಕ್ನೋವಿಗೆ ಹೋಗುತ್ತಿದ್ದ ರೈಲು ಗಾಡಿಯನ್ನು ಏರಿದ. ರೈಲು ನಿಂತ ನಿಲ್ದಾಣಗಳಲ್ಲೆಲ್ಲ ತಾನೂ ಕೆಳಗಿಳಿದು ಸುಮ್ಮನೆ ನಿಲ್ಲುತ್ತಿದ್ದ. ಒಂದು ಸ್ಟೇಷನ್ನಿನಲ್ಲಿ ಸ್ಟೇಷನ ಮಾಸ್ಟರನು ಹಣದ ಚೀಲವೊಂದನ್ನು ತಂದು ಗಾರ್ಡಿನ ಡಬ್ಬಿಯೊಳಕ್ಕೆ ಒಯ್ಯುತ್ತಿದ್ದುದನ್ನು ಗಮನಿಸಿದ. ಕೂಡಲೇ ಅವನು ಗಾರ್ಡಿನ ಡಬ್ಬಿಯ ಪಕ್ಕದ ಡಬ್ಬಿಗೆ ಬಂದು ಕುಳಿತ. ಪ್ರತಿ ಸ್ಟೇಷನ್ನಿನಲ್ಲಿಯೂ ಹೀಗೆ ಹಣದ ಚೀಲಗಳು ಬಂದು ಗಾರ್ಡಿನ ಡಬ್ಬಿಯಲ್ಲಿಟ್ಟಿದ್ದ ಒಂದು ಕಬ್ಬಿಣದ ಸಂದೂಕದೊಳಕ್ಕೆ ಬಿಳುತ್ತಿದ್ದವು. ಲಕ್ನೋನಲ್ಲಿ ಇಳಿದು ಗಮನಿಸಿದಾಗ ಇದಕ್ಕೆ ಯಾವ ವಿಶೇಷವಾದ ಭದ್ರತೆಯ ಏರ್ಪಾಡೂ ಇದ್ದಂತೆ ತೋರಲಿಲ್ಲ. ಅವನು ಓಡಿ ಹೋಗಿ ತಾನು ಬಂದ ಗಾಡಿ ಯಾವುದು ಎಂದು ವೇಳಾ ಪಟ್ಟಿಯಿಂದ ಅರಿತ. ಅದು ಎಂಟನೆಯ ನಂಬರ ಡೌನ್ ಗಾಡಿ.

“ಎಲ್ಲಾ! ಏನು ಇಲ್ಲವೆಂದರೂ ಇದರಲ್ಲಿ ಹತ್ತು ಸಾವಿರ ರೂಪಾಯಿಗಳಿಗೆ ಕಡಿಮೆಯಿಲ್ಲ. ಇಂತಹ ಸದವಕಾಶವನ್ನು ಬಿಡಬಾರದು” ಎಂದು ಸರಸರನೆ ನಿರ್ಧಾರಕ್ಕೆ ಬಂದ. ಮುಂದೆ ಕಾಕೋರಿಯಲ್ಲಿ ನಡೆದ ರೈಲು ಡಕಾಯಿತಿ ಪ್ರಕರಣಕ್ಕೆ ಇದು ಅಂಕುರಾರ್ಪಣೆಯಾದಂತಾಯಿತು.

ಕ್ರಾಂತಿಕಾರರ ಸಭೆ ಕೂಡಿತು. ಕಾಶಿ, ಕಾನ್ಪುರ, ಲಕ್ನೋ, ಆಗ್ರಾಗಳಿಂದ ಸದಸ್ಯರು ಬಂದಿದ್ದರು. ರಾಮಪ್ರಸಾದ ತಾನು ಆಲೋಚಿಸಿದ್ದನ್ನು ಸಭೆಗೆ ವಿವರಿಸಿದ.

“ನಾವು ರೈಲಿನಲ್ಲಿ ಬರುವ ಸರಕಾರಿ ಹಣದಲೂಟಿ ಮಾಡಿದರೆ ನಮ್ಮ ಚಳುವಳಿಗೆ ಬೇಕಾದ ಪ್ರಮಾಣದಲ್ಲಿ ಹಣ ದೊರೆಯುತ್ತದೆ. ಮೇಲಾಗಿ ನಮ್ಮ ಜನರ ಮೇಲೆಯೇ ನಾವು ಕೈ ಮಾಡುವ ಅವಶ್ಯಕತೆಯಿರುವುದಿಲ್ಲ. ಕಾರ್ಯವೇನೋ ಕಠಿಣವಾದುದು. ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕಾದ ಕೆಲಸ. ಆದರೆ ನಮ್ಮ ಪ್ರಯತ್ನಗಳಿಗೆ ಸಕಲ ದೃಷ್ಟಿಗಳಿಂದಲೂ ತಕ್ಕ ಪ್ರತಿಫಲವಿದೆ. ಸರಕಾರಕ್ಕೂ ಸಹ ಕ್ರಾತಿಕಾರಿಗಳು ಬರಿ ಬಾಯ ಕ್ರಾಂತಿಕಾರರಲ್ಲ, ಕಾರ್ಯತಃ ಕ್ರಾಂತಿಕಾರಿಗಳು ಎಂಬುವುದನ್ನು ತಿಳಿಸಿಕೊಟ್ಟಂತಾಗುತ್ತದೆ” ಎಂದ. ಸಭೆಗೆ ಆ ಸೂಚನೆ ಕೇಳಿ ಬಹಳ ಮೆಚ್ಚುಗೆಯಾಯಿತು. ಪರಾಕ್ರಮ ತೋರಿ ಮಾಡಬಹುದಾದ ಕಾರ್ಯಚರಣೆಗಳಿಗಾಗಿ ಕ್ರಾಂತಿಕಾರರು ಕಾತುರರಾಗಿದ್ದರು. ಹೆಚ್ಚು ಕಡಿಮೆ ಎಲ್ಲರೂ “ಸರಿ, ಸರಿ, ಸೊಗಸಾದ ಅಲೋಚನೆ” ಎಂದರು.

ಮೌನವಾಗಿ ಎಲ್ಲವನ್ನೂ ಕೇಳುತ್ತಾ ಕ್ರಾಂತಿಕಾರಿ ಆಶ್ಪಾಕ್ ಆ ಯೋಜನೆಯನ್ನು ಕುರಿತು ಪೂರ್ವಭಾವಿಯಾಗಿ ರಾಮಪ್ರಸಾದನಿಂದ ಕೇಳಿದಾಗಿನಿಂದ ಕೂಲಂಕುಷವಾಗಿ ಆಲೋಚಿಸಿದ್ದ. ಎಲ್ಲರೂ ಹೂಂ, ಹೂಂ ಎನ್ನುವವರೇ ಆದಾಗ ತಾನು ಸುಮ್ಮನಿದ್ದರಾಗದು ಎಂದುಕೊಂಡು, “ಮಿತ್ರರೇ ನನಗೇನೋ ಈ ಹೆಜ್ಜೆ ಆತುರದ್ದು ಎನಿಸುತ್ತದೆ. ರಾಮಪ್ರಸಾದ್ ಹೇಳಿದಂತೆ ಹಲವು ದೃಷ್ಟಿಗಳಿಂದ ಅದು ಒಳ್ಳೆಯದೇ ಇರಬಹುದು. ಆದರೆ ನಮ್ಮ ಬಲವೆಷ್ಟು, ನಾವು ಎದುರಿಸುತ್ತಿರುವ ಸರಕಾರದ ಬಲವೆಷ್ಟು ಎಂಬುವುದನ್ನು ಕುರಿತು ಯಾರೂ ಅಲೋಚಿಸಿದಂತಿಲ್ಲ. ಸಾಧಾರಣವಾದ ಡಕಾಯಿತಿ ನಡೆಸಿದಾಗ ದೊರೆಯುವ ಧನ ಕಡಿಮೆ. ಅಷ್ಟೇ ಮಟ್ಟಿಗೆ ದೇಶದಲ್ಲಿ ದಿನನಿತ್ಯ ನಡೆಯುವ ಹತ್ತಾರು ಘಟನೆಗಳಲ್ಲಿ ಒಂದಾಗಿ ಅದನ್ನು ಸರಕಾರ ಎಣಿಸುತ್ತದೆ. ಮಾಮೂಲಾಗಿ ಪೋಲಿಸರು ಏನು ಮಾಡುತ್ತಾರೆಯೋ ಅಷ್ಟನ್ನೇ ನಾವು ಎದುರಿಸಬೇಕಾಗುತ್ತದೆ. ಸರಕಾರದ ಖಜಾನೆಗೆ ಕೈಯಿಟ್ಟರೆ ಮಾತೇ ಬೇರೆ. ಇಡೀ ಆಡಳಿತ ಯಂತ್ರ ನಮ್ಮನ್ನು ಪತ್ತೇ ಮಾಡಿ ಹತ್ತಿಕ್ಕುವುದರಲ್ಲಿ ತೊಡಗುತ್ತದೆ. ನಮ್ಮ ಪಕ್ಷಕ್ಕೆ ಅದರಿಂದ ಪಾರಾಗುವಷ್ಟು ಬಲವಿಲ್ಲವೆಂಬುವುದನ್ನು ನನ್ನ ಅಭಿಪ್ರಾಯ. ಈ ಯೋಜನೆಯನ್ನು ಕೈಬಿಡುವುದು ಒಳ್ಳೆಯದು” ಎಂದು ಸ್ಪಷ್ಟವಾಗಿ ತಿಳಿಸಿದ.

ಉತ್ಸಾಹದ ಪ್ರವಾಹದಲ್ಲಿದ್ದ ಕ್ರಾಂತಿಕಾರರು ಈ ರೀತಿಯ ವಿವೇಕವನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬಹಳ ಹೊತ್ತು ಚರ್ಚೆ ಮಾಡಿ, ಆ ಯೋಜನೆಯನ್ನು ಒಪ್ಪಿ, ಅದರ ನಿರ್ವಹಣೆಯನ್ನು ರಾಮ ಪ್ರಸಾದನಿಗೆ ಬಿಟ್ಟರು. ಆಗ ರಾಮಪ್ರಸಾದ್, “ಮಿತ್ರರೇ, ಒಂದು ಮಾತು. ನಮ್ಮ ಮೇಲೆ ಗುಂಡು ಹಾರಿಸದ ಹೊರತು ನಾವಾಗಿಯೇ ಯಾರನ್ನೂ ಕೊಲೆ ಮಾಡಲು ಮುಂದಾಗಬಾರದು. ಸಾಧ್ಯವಿದ್ದಷ್ಟು ಮಟ್ಟಿಗೆ ರಕ್ತಪಾತವಾಗದಂತೆ ಕಾರ್ಯ ಸಾಗಬೇಕು ” ಎಂದು ಎಚ್ಚರಿಸಿದ. ಸಭೆ ಚದುರಿತು.

1925ನೆಯ ಇಸವಿ ಅಗಸ್ಟ್ ತಿಂಗಳ ಒಂಬತ್ತರಂದು ಸಂಜೆ ಷಾಹಜನಪುರದಿಂದ ಲಕ್ನೋವಿಗೆ ಹೊರಟಿದ್ದ ಎಂಟನೆಯ ನಂಬರ ಡೌನ್ ರೈಲುಗಾಡಿ ಕಾಕೋರಿ ಗ್ರಾಮದ ಬಳಿ ಸಾಗಿತ್ತು. ಸೂರ್ಯ ಸರಸರನೆ ಪಶ್ಚಿಮಕ್ಕೆ ಇಳಿಯುತ್ತಿದ್ದ. ತಟಕ್ಕನೆ ರೈಲಿನ ಸರಪಳಿ ಎಳೆಯಲ್ಪಟ್ಟಿತ್ತು. ವೇಗದಿಂದ ಸಾಗಿದ್ದ ಗಾಡಿ ಹಠಾತ್ತಾನೆ ನಿಂತಿತ್ತು.

ಎರಡನೆಯ ತರಗತಿಯ ಡಬ್ಬಿಯೊಂದರಿಂದ ಅಶ್ಪಾಕ್ ಉಲ್ಲಾ ತನ್ನ ಸಂಗಡಿಗರಾದ ಶಚೀಂದ್ರ ಬಕ್ಷಿ ಮತ್ತು ರಾಜೇಂದ್ರ ಲಾಹಿರಿಯವರೊಂದಿಗೆ ನೆಲಕ್ಕೆ ಜಿಗಿದ. ಕಾಕೋರಿ ಕಾರ್ಯಕ್ರಮದಲ್ಲಿ ಅವನಿಗೆ ವಹಿಸಿದ್ದ ಮೊದಲ ಜವಾಬ್ದಾರಿಯು ಮುಗಿದಿತ್ತು.

ಆ ವೇಳೆಗೆ ಗಾರ್ಡು ತನ್ನ ಡಬ್ಬಿಯಿಂದ ಇಳಿದು ಸರಪಳಿ ಎಳೆದುದು ಯಾವ ಡಬ್ಬಿಯಲ್ಲಿ, ಏನಾಗಿದೆ ವಿಚಾರಿಸಲು ಹೊರಟಿದ್ದ. ಇಬ್ಬರು ಕ್ರಾಂತಿಕಾರರು ಅವನ ಮೇಲೆ ಬಿದ್ದರು. ಮುಖವನ್ನು ಕೆಳಕ್ಕೆ ಮಾಡಿ ಮಲಗಿಸಿ ಎದ್ದರೆ ತಲೆ ಹಾರಿಸುವುದಾಗಿ ಎಚ್ಚರಿಕೆ ನೀಡಿ ಪಿಸ್ತೂಲನ್ನು ಗುರಿಯಿಟ್ಟು ನಿಂತರು.

ಇನ್ನಿಬ್ಬರು ಕ್ರಾಂತಿಕಾರರು ಡ್ರೈವರನ್ನು ಎಂಜಿನ್ನಿನಿಂದ ಕೆಳಕ್ಕೆ ತಳ್ಳಿ ನೆಲಕ್ಕೆ ಬೀಳಿಸಿ ಕಾವಲು ನಿಂತರು.

ಗಾಡಿಯ ಆ ತುದಿಯಲ್ಲಿ ಒಬ್ಬ, ಈ ತುದಿಯಲ್ಲಿ ಒಬ್ಬ ಕ್ರಾಂತಿಕಾರರು ನಿಂತು ತಮ್ಮ ಮೌಜರ್‌ ಪಿಸ್ತೂಲುಗಳಿಂದ ಗುಂಡುಹಾರಿಸಿದರು. ನಡುವೆ ಗಂಭೀರ ಧ್ವನಿಯಿಂದ “ಪ್ರಯಣಿಕರೇ, ಹೆದರಬೇಡಿ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವ ಕ್ರಾಂತಿಕಾರರು. ನಿಮ್ಮ ಜೀವಕ್ಕಾಗಲೀ, ಹಣಕ್ಕಾಗಲಿ, ಮಾನಕ್ಕಾಗಲೀ ಯಾವ ಅಪಾಯವೂ ಇಲ್ಲ. ಆದರೆ ತಲೆ ಹೊರಗೆ ಇಟ್ಟೀರಿ ಜೋಕೆ!” ಎಂದು ಘೋಷಿಸತೊಡಗಿದರು.

ಉಳಿದ ನಾಲ್ವರು ಕ್ರಾಂತಿಕಾರರು ಗಾರ್ಡ್ ಡಬ್ಬಿಯನ್ನು ಹತ್ತಿದರು. ಬಹಳ ಶ್ರಮದಿಂದ ಸಂದೂಕವನ್ನು ಹೊರ ತಳ್ಳಿದರು. ಅದಕ್ಕೆ ಭದ್ರವಾದ ಬೀಗ ಹಾಕಿತ್ತು. ಡ್ರೈವರನನ್ನಾಗಲೀ, ಗಾರ್ಡನಲ್ಲಾಗಲೀ ಕೀಲಿ ಇರಲಿಲ್ಲ. ಆ ಸಂದೂಕಕ್ಕೆ ಚೀಲಗಳನ್ನು ಹಾಕಲು ರಂಧ್ರವೊಂದಿತ್ತು. ಅದರಿಂದ ಏನನ್ನೂ ತೆಗೆಯಲು ಆಗುತ್ತಿರಲಿಲ್ಲ.
ಕ್ರಾಂತಿಕಾರರು ಸುತ್ತಿಗೆಗಳನ್ನೆತ್ತಿ ಅದನ್ನು ಒಡೆಯಲು ತೊಡಗಿದರು. ಹತ್ತೇಟು ಬಿದ್ದರೂ ತಡೆದುಕೊಂಡು ಜಗ್ಗದೆ ನಿಂತಿತು ಸಂದೂಕ. ಗಸ್ತು ತಿರುಗುತ್ತಿದ್ದ ಆಶ್ಪಾಕ್ ನೋಡಿದ. ದೇಹಬಲದಲ್ಲಿ ಆ ಕ್ರಾಂತಿಕಾರಿ ದಳದಲ್ಲಿ ಅವನೇ ಅಸಮಾನ. ತನ್ನ ಕೈಯಲ್ಲಿದ್ದ ಮೌಜರ ಪಿಸ್ತೂಲನ್ನು ಮನ್ಮಥ ನಾಥನಿಗೆ ಕೊಟ್ಟು ಸಂದೂಕದತ್ತ ಓಡಿದ. ಸುತ್ತಿಗೆ ಎತ್ತಿ ರಂಧ್ರವನ್ನು ದೊಡ್ಡದು ಮಾಡಲೆಂದು ಏಟಿನ ಮೇಲೆ ಎಟು ಜಡಿದ. ಅವನ ಏಟುಗಳ ಧ್ವನಿ ಸುತ್ತಲಿನ ನಿರ್ಜನ ಪ್ರದೇಶದಲ್ಲಿ ಢಣ್, ಢಣ್ ಎಂದು ಪ್ರತಿಧ್ವನಿತವಾಗತೊಡಗಿತು.

ಅಷ್ಟರಲ್ಲಿ ಲಕ್ನೋವಿನ ಕಡೆಯಿಂದ ರೈಲು ಗಾಡಿಯೊಂದು ಬರುತ್ತಿರುವ ಶಬ್ದ ಕೇಳೀಬಂತು. ಆತಂಕದಿಂದ ಆ ಕೆಲವು ಕ್ಷಣಗಳೇ ಯುಗಗಳಂತೆ ತೋರಿತು. ವೇಗವಾಗಿ ಬರುತ್ತಿದ್ದ ಆ ರೈಲು ಇದೇನನ್ನೂ ಗಮನಕ್ಕೆ ತಂದುಕೊಳ್ಳದೇ ಪಕ್ಕದ ಹಳ್ಳಿಗಳ ಮೇಲೆ ಓಡಿತು.

ಮತ್ತೇ ಕಾರ್ಯಾಚರಣೆ ಆರಂಭವಾಯಿತು. . ಢಣ್ ! ಡಣ್ !! ಡಣಾರ !!! ಸಂದೂಕದ ರಂದ್ರದ ಮೇಲೆ ಬಲವಾದ ಏಟುಗಳು ಮೇಲೆ ಏಟುಗಳು ಬಿದ್ದು ಅದು ದೊಡ್ಡದಾಯಿತು. ಹಣದ ಚೀಲಗಳು ಹೊರ ಬಂದವು.

ಈ ನಡುವೆ ಗಾಡಿಯಲ್ಲಿದ್ದ ಪ್ರಯಾಣಿಕರು ಶಾಂತರಾಗಿಯೇ ಇದ್ದರು. ಪಿಸ್ತೂಲುಗಳಿದ್ದ ಆಂಗ್ಲ ಅಧಿಕಾರಿಗಳೂ ಇದ್ದರು ಅವರಲ್ಲಿ. ದೊಡ್ಡ ಡಕಾಯಿತರ ಗುಂಪು ದಾಳಿ ನಡೆಸಿದೆ ಎಂದು ಭಾವಿಸಿದ ಅವರು ಕಮಕ್ ಕಿಮಕ್ಕೆನ್ನದೆ ಕುಳಿತಿದ್ದರು.

ಆದರೆ ಹೊಸದಾಗಿ ಮದುವೆಯಾಗಿ ಆ ರೈಲಿನಲ್ಲಿ ಹೆಂಡತಿಯನ್ನು ಕರೆತರುತ್ತಿದ್ದ ಒಬ್ಬ ತರುಣ, ಹೆಂಗಸರ ಡಬ್ಬಿಯನ್ನು ಕುಳಿತ್ತಿದ್ದ ಹೆಂಡತಿಗೆ ಏನಾದರೂ ಅಪಾಯವೊದಗಿತೋ ಎಂಬ ಯೋಚನೆಯಿಂದ ತಲೆಯನ್ನು ಒಮ್ಮೆ ಹೊರಚಾಚಿದ. ಕ್ರಾಂತಿಕಾರನೊಬ್ಬನ ಗುಂಡು ಅವನ ತಲೆಗೆ ಹೊಡೆದು ಅಲ್ಲಿಯೇ ಸತ್ತು ಬಿದ್ದ.

ಇದಾವುದೂ ಇತರ ಕ್ರಾಂತಿಕಾರರ ಗಮನಕ್ಕೆ ಬರಲಿಲ್ಲ. ಸಂದೂಕ ಬಾಯಿ ಬಿಟ್ಟಿತು. ಹಣದ ಚೀಳಗಳು ಹೊರ ಬಂದಿದ್ದವು. ಅವುಗಳನ್ನು ಕಂಬಳಿಗಳಲ್ಲಿ ಕಟ್ಟಿ ಹೊತ್ತು ಲಕ್ನೋವಿನತ್ತ ನಡೆದರು!.

ಹತ್ತೇ ಹತ್ತು ಮಂದಿ ಧೈರ್ಯ, ಸಾಹಸ, ಶಿಸ್ತು ತಾಳ್ಮೆ ಮೇಲಾಗಿ ಅಮೋಘ ನಾಯಕತ್ವ ಹಾಗೂ ಅಪಾರ ಶ್ರದ್ಧೆಗಳಿಂದಾಗಿ ಮಹಾನ್ ಕಾರ್ಯಚರಣೆಯನ್ನು ಯಶಸ್ವಿಯಾಗಿ ಮುಗಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟ ಹೋರಾಟದಲ್ಲಿ ಸಾಹಸದ ಅಧ್ಯಾಯವೊಂದನ್ನು ಬರೆದರು. ಆ ಹತ್ತು ಮಂದಿ ಕ್ರಾಂತಿವೀರರೆಂದರೆ ರಾಮಪ್ರಸಾದ್ ಬಿಸ್ಮಿಲ್ಲ, ರಾಜೇಂದ್ರ ಲಾಹಿರಿ, ಠಾಕೂರ ರೋಷನ್ ಸಿಂಹ, ಶಚೀಂದರ ಬಕ್ಷಿ, ಚಂದ್ರಶೇಖರ ಅಜಾದ್, ಕೇಶವ ಚಕ್ರವರ್ತಿ, ಗನವಾರಿಲಾಲ್, ಮುಕುಂದೀಲಾಲ್, ಮನ್ಮಥ ನಾಥ ಗುಪ್ತ ಮತ್ತು ಅಶ್ಪಾಕ್ ಉಲ್ಲಾ ಖಾನ್.

ಮುಂದೆ ಕೆಲವುತಿಂಗಳುಗಳಲ್ಲಿ ಅಲ್ಲಲ್ಲಿ ಬಂಧನಗಳಾಗಿ ಹಲವು ವಿಚಾರಣೆ, ಮೊಕದ್ದೊಮ್ಮೆ ಮತ್ತು ಪೂರಕ ಮೊಕದ್ದೊಮ್ಮೆಗಳೊಂದಿಗೆ ರಾಮಪ್ರಸಾದ ಬಿಸ್ಮಿಲ್, ಅಶ್ಪಾಕ್ ಉಲ್ಲಾ ಖಾನ್, ರಾಜೇಂದ್ರ ಲಾಹಿರಿ, ರೋಶನ್ ಸಿಂಹ, ಈ ನಾಲ್ವರಿಗೆ ಮರಣದಂಡನೆಯಾಯಿತು. ಹಲವರಿಗೆ ಜೀವಾವಧಿ ಸಜೆ ಆಯಿತು. ದೇಶಕ್ಕಾಗಿ ತಮ್ಮ ಸ್ವಾರ್ಥವನ್ನು ಕಿಂಚಿತ್ತೂ ಲೆಕ್ಕಿಸದೆ ಈ ಯುವಕರು ಪ್ರಾಣಾರ್ಪಣೆ ಮಾಡಿದ್ದರು.

ಆಧಾರ: ರಾಷ್ಟ್ರೋತ್ಥಾನ ಪುಸ್ತಕಮಾಲೆ

source: 'ಕನ್ನಡ ಸಂಪದ'ದಲ್ಲಿ ಮೂಡಿದ ಬರಹ